ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"
*ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"*
ಕೆಲವೊಂದು ಕುಟುಂಬ ಮದುವೆಯ ನಂತರ ಬೇರ್ಪಡುವುದುಂಟು. ಇನ್ನೂ ಕೆಲವರು ಒಟ್ಟಿಗೇನೇ ತಂದೆ ತಾಯಿಯೊಂದಿಗೆ ಹೆಂಡತಿ ಹಾಗೂ ಮಕ್ಕಳು ಜೊತೆಗೇ ಇರುತ್ತಾರೆ. ತಂದೆ ತಾಯಿಯ ಜೊತೆಗೆ ಬೆಳೆಯುವ ಕೆಲವೊಂದು ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತಿದ್ದಾರೆ. ಕೆಲಸದ ಒತ್ತಡ, ಹಣಕ್ಕಾಗಿ ಕೆಲಸದ ಅನಿವಾರ್ಯತೆ, ಮನೆಯಲ್ಲಿ ಕೂರದೆ ಗೆಳೆಯ ಮನೆಯಲ್ಲಿ ನೆಮ್ಮದಿ ಈ ರೀತಿಯಾಗಿ ಕಾರಣ ಹೇಳಿ ಮನೆಯಿಂದ ಕಾಲ್ಕಿತ್ತವರು ಮಕ್ಕಳನ್ನು ಬಂಧಿಯಾಗಿಸುತ್ತಿದ್ದಾರೆ. ಇದು ಸಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತಪ್ಪು. ಇದನ್ನು ತಿದ್ದಿ ಕೊಳ್ಳುವ ಅನಿವಾರ್ಯತೆ ನಮ್ಮೆಡೆಯಲ್ಲಿದೆ.
ದಿನಂಪ್ರತೀ ಬೆಳಿಗ್ಗೆ ಸೂರ್ಯೋದಯದ ಮೊದಲು ತನ್ನ ದಿನಚರಿ ವಸ್ತುಗಳೊಂದಿಗೆ ಮನೆ ಬಿಟ್ಟು ದೂರದ ಆಫೀಸಿಗೋ ಅಥವಾ ಹೊಲಕ್ಕೆ ಕೆಲಸಕ್ಕೆಂದು ಹೊರಟ ಅಪ್ಪ ನಂತರ ಸಾಯಂಕಾಲ ಆರು ಘಂಟೆಗೆ ಬಳಲಿದ ದೇಹದೊಂದಿಗೆ ಮನೆಯ ಕಡೆ ಬರುತ್ತಾನೆ. ಮಧ್ಯಾಹ್ನ ಸಾಬಾನ ಕೈಯಿಂದ ಖರೀದಿಸಿದ ಮೀನಿನ ಜೊತೆಗೆ ಗಂಜಿ ಚಟ್ನಿಯನ್ನೂ ಸೇವಿಸಿ ಸ್ವಲ್ಪ ಹೊತ್ತು ಮೊಬೈಲಲ್ಲೋ ಅಥವಾ ದಿನ ಪತ್ರಿಕೆ ಓದಿಯೋ ಕಾಲ ಕಳೆದು ಮಲಗುತ್ತಾನೆ... ಮರುದಿನ ಅದೇ ಅಪ್ಪ, ಅದೇ ರೀತಿ..
ಒಂದು ರೀತಿಯಾಗಿ ಹೇಳಬೇಕಾದರೆ, ದೂರದ ದುಬಾಯಿ ಅಥವಾ ಸೌದಿಯಲ್ಲಿರುವ ಉದ್ಯೋಗಿ ತನ್ನ ವರ್ಷದ ಅವಧಿಯ ತಿಂಗಳ ರಜೆಯಲ್ಲಿ ಬಂದು ಮಕ್ಕಳಿಗೆ ಕೊಡುವಷ್ಟು ವಾತ್ಸಲ್ಯವು ಊರಲ್ಲಿರುವ ಅಪ್ಪಂದಿರ ಮಕ್ಕಳಿಗೆ ಸಿಗುತ್ತಿಲ್ಲ.
ಯಾಕೆ ಹೀಗಾಗಿದೆ....!
ತನ್ನ ಮಕ್ಕಳ ಪಾಲಿನ ಸಿಂಹವಾಗಿ ಮಾರ್ಪಡುವ ಕೆಲ ಅಪ್ಪಂದಿರು, ಮಕ್ಕಳಿಗೆ ಪ್ರೀತಿ ಹಾಗೂ ಧೈರ್ಯ ಕೊಡುವುದರಲ್ಲಿ ಎಡವಿದ್ದಾರೆ. ತಂದೆಯನ್ನು ಕಂಡರೆ ಅಮ್ಮನ ಸೆರಗಿನೆಡೆಯಲ್ಲೋ ಅಥವಾ ರೂಮಿನ ಕೋಣೆಯೆಡೆಯಲ್ಲಿ ಅವಿತುಕೊಳ್ಳುವ ಮಕ್ಕಳು ಸಮಾಜದಲ್ಲಾದರು ಹೇಗೆ ಧೈರ್ಯವಂತರಾಗುತ್ತಾರೆ...?
ವಾತ್ಸಲ್ಯ ಅಥವಾ ಮುದ್ದಾದ ಮಾತಿನಿಂದ, ಮನೋರಂಜನೆಯಿಂದ, ಒಂದೇ ಟೇಬಲಲ್ಲಿ ಕೂತು ಊಟ ಮಾಡುವುದರಿಂದ, ಮಕ್ಕಳ ಆಟದಲ್ಲಿ ಪಾಲ್ಗೊಳ್ಳುದು ಈ ರೀತಿಯಾಗಿ ತಂದೆಯಂದಿರು ಮಕ್ಕಳೊಂದಿಗೆ ಬೆರೆತುಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಧೈರ್ಯ ತುಂಬಬೇಕು, ಸಮಾಜದ ಆಗು ಹೋಗುಗಳನ್ನು, ಕುಟುಂಬದಲ್ಲಾಗುವ ಕಷ್ಟ ನಷ್ಟಗಳನ್ನು ಚರ್ಚಿಸಬೇಕು.
ಮಕ್ಕಳ ಕಡೆಯಿಂದ ಅನಗತ್ಯ ತಪ್ಪುಗಳು ಕಂಡುಬಂದಾಗ ಮಾತ್ರ ಅವರನ್ನು ಗಧರಿಸಿ ಜೊತೆಗೆ ಎರಡು ಏಟು ಕೊಟ್ಟರೆ ತಪ್ಪೇನಿಲ್ಲ. ಆದರೆ, ವಿನಾಕಾರಣ ಮಕ್ಕಳೆಡೆಯಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಿ ಅಥವಾ ಹೊಡೆಯುತ್ತಲೇ ಇದ್ದರೆ ಅವರು ಜೀವನದಲ್ಲಿ ಧೈರ್ಯ ಕಳೆದುಕೊಂಡವರಾಗಿ ಷಮಾಜದ ಬಗ್ಗೆ ಅರಿವೇ ಇಲ್ಲದವರಾಗುವುದರಲ್ಲಿ ಸಂಶಯವಿಲ್ಲ.
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
Comments
Post a Comment