🇯🇴🇮🇷🇸🇦🇹🇦🇪🇸🇾🇷🇨🇲🇨🇮

ಯೆಮನ್ ದೇಶದಲ್ಲಿ ಏನು ನಡೆಯುತ್ತಿದೆ..?
.......
ಕಲಹ ನಡೆಯಲೂ ಕಾರನವೇನು..?
ಈಕೆಲಗಿನ ಲೇಖನ ಓದಿ...

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸಾಮಾನ್ಯವಾದರೂ ಸದ್ಯ ಯೆಮೆನ್‌ ಅಕ್ಷರಶಃ ರಣರಂಗವಾಗಿದೆ. ಶಿಯಾ ಬಂಡುಕೋರರು ಮತ್ತು ಸುನ್ನಿ ಬೆಂಬಲಿತ ಸರ್ಕಾರದ ನಡುವೆ ಬಿಕ್ಕಟ್ಟು ತಾರಕ್ಕೇರಿದೆ. ಈ ನಡುವೆ ಬಿಕ್ಕಟ್ಟನ್ನು ನಿರ್ವಹಿಸಲಾಗದೇ ಯೆಮೆನ್‌ ಅಧ್ಯಕ್ಷ ಅಬೆದ್ರಬ್ಬೊಮನ್ಸೂರ್‌ ಹದಿ ವಿದೇಶಕ್ಕೆ ಪಲಾಯನ ಗೈದಿದ್ದು, ಸೌದಿ ಅರೇಬಿಯಾದ ನೆರವು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳ ಒಕ್ಕೂಟ ಯೆಮೆನ್‌ ಮೇಲೆ ವಾಯು ದಾಳಿ ನಡೆಸುತ್ತಿದೆ. ಮಾ.25 ನಂತರ ಯೆಮನ್‌ನಲ್ಲಿ ಯುದ್ಧ ಸದೃಶ ವಾತಾವರಣ ಸೃಷ್ಟಿಯಾಗಿದೆ. ಇದು ಇತರ ರಾಷ್ಟ್ರಗಳಿಗೂ ಹಬ್ಬುವ ಆತಂಕ ಎದುರಾಗಿದೆ. ಈ ನಡುವೆ ಅಲ್ಲಿ ಅತಂತ್ರರಾಗಿರುವ ಭಾರತೀಯರನ್ನು ರನ್ನು ರಕ್ಷಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟಿಗೆ ಏನು ಕಾರಣ? ಯೆಮೆನ್‌ನಲ್ಲಿ ಏನು ನಡೆಯುತ್ತಿದೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ.

ಯೆಮೆನ್‌ನಲ್ಲಿ ಏನಾಗುತ್ತಿದೆ.
2011ರಿಂದ ಆಂತರಿಕ ಕಲಹಕ್ಕೆ ಸಿಲುಕಿ ಛಿದ್ರವಾಗಿರುವ ಯೆಮೆನ್‌ನಲ್ಲಿ ಸದ್ಯ ಉಗ್ರರದ್ದೇ ಸಾಮ್ರಾಜ್ಯ ಎನ್ನುವಂತಾಗಿದೆ. ಅಧಿಕಾರ ಮತ್ತು ಸಂಪನ್ಮೂಲದ ಅಸಮಾನ ಹಂಚಿಕೆಯ ಫ‌ಲವಾಗಿ ಯೆಮೆನ್‌ನಲ್ಲಿ ಇತ್ತೀಚೆಗೆ ಘರ್ಷಣೆ ಹಿಂಸಾಚಾರ ಸಾಮಾನ್ಯವೆನಿಸಿಬಿಟ್ಟಿದೆ. ಬಡತನ ನಿರುದ್ಯೋಗ ಹಸಿವಿನಿಂದ ನರಳುತ್ತಿರುವ ಈ ದೇಶದಲ್ಲಿ ಒಳಗೊಳಗೆ ಕುದಿಯುತ್ತಿದ್ದ ಕೋಪ ಈಗ ಬಂಡಾಯದ ಸ್ವರೂಪ ಪಡೆದುಕೊಂಡಿದೆ. ಅದು ಯುದ್ಧ ಸ್ವರೂಪವನ್ನೂ ಪಡೆದುಕೊಂಡಿದೆ. ಪರಿಸ್ಥಿತಿಯ ಲಾಭ ಪಡೆದು ಅಲ್‌ ಖೈದಾ ಮತ್ತು ಐಸಿಸ್‌ ಉಗ್ರರು ಭಯೋತ್ಪಾದಕ ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ.

ಯಾರ ನಡುವೆ ಕಾಳಗ?
ಚುನಾಯಿತ ಅಧ್ಯಕ್ಷ ಅಬೆದ್ರಬ್ಬೊಮನ್ಸೂರ್‌ ಹದಿ ಸರ್ಕಾರದ ವಿರುದ್ಧ ಶಿಯಾ ಪಂಗಡಕ್ಕೆ ಸೇರಿದ ಹೌತಿ ಬಂಡುಕೋರರು ಸಮರ ಸಾರಿದ್ದಾರೆ. ರಾಜಧಾನಿ ಸನಾವನ್ನು ತಮ್ಮ ವಶಕ್ಕೆ ಪಡೆದು ಪ್ರತ್ಯೇಕ ಸರ್ಕಾರ ರಚಿಸಿಕೊಂಡಿದ್ದಾರೆ. ಬಿಕ್ಕಟ್ಟನ್ನು ಎದುರಿಸಲಾಗದೇ ಪಲಾಯನ ಗೈದು ಏಡನ್‌ ನಗರದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಂಡು ಸರ್ಕಾರ ನಡೆಸುತ್ತಿದ್ದ ಹದಿ ಕಂಗಾಲಾಗಿ ಸೌದಿ ಅರೇಬಿಯಾಕ್ಕೆ ಪಲಾಯನಗೈದಿದ್ದಾರೆ. ಹದಿ ಬೆಂಬಲಕ್ಕೆ ನಿಂತಿರುವ ಸೌದಿ ಅರೇಬಿಯಾ ನೇತೃತ್ವದ ಗಲ್ಫ್ ರಾಷ್ಟ್ರಗಳ ಒಕ್ಕೂಟ ಹೌತಿ ಬಂಡುಕೋರರ ವಿರುದ್ಧ ವೈಮಾನಿಕ ದಾಳಿ ನಡೆಸುತ್ತಿದ್ದು, ಯೆಮೆನ್‌ ಅಕ್ಷರಶಃ ರಣರಂಗವಾಗಿದೆ. ಬಹುತೇಕ ಎಲ್ಲ ರಾಷ್ಟ್ರಗಳು ತಮ್ಮ ನಾಗರಿಕರನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿದೆ. ಭಾರತ ಕೂಡ ಈ ಪ್ರಯತ್ನದಲ್ಲಿ ನಿರತವಾಗಿದೆ.

ಯಾರು ಈ ಹೌತಿ ಬಂಡುಕೋರರು?
ಶಿಯಾ ಮುಸ್ಲಿಮರ ಒಂದು ಗುಂಪಿದು. ಶಿಯಾ ಇಸ್ಲಾಂನ ಜೈದಿಸಂ ಪಂಗಡವನ್ನು ಒಪ್ಪಿಕೊಂಡಿರುವ ಅನ್ಸಾರ್‌ ಅಲ್ಲಾಹ್‌ ಎಂದು ಎಂದು ಕರೆಯಾಗುವ ಬಂಡುಕೋರರು ಹೌತಿಗಳ ಜತೆ ಗುರುತಿಸಿಕೊಂಡಿದ್ದಾರೆ. ಜೈದಿಗಳು ಯೆಮೆನ್‌ನಲ್ಲಿ ಮೂರನೇ ಒಂದರಷ್ಟಿದ್ದಾರೆ. ಹುಸೇನ್‌ ಬದರ್‌ ಅಲ್‌ ದಿನ್‌ ಅಲ್‌ ಹೌತಿ ಎಂಬಾತನಿಂದ ಹೆಸರನ್ನು ಪಡೆದುಕೊಂಡಿದ್ದಾರೆ. ಆತ ಸುನ್ನಿ ಸಂಪ್ರದಾಯವನ್ನು ರಕ್ಷಿಸಲು 2004ರಲ್ಲಿ ಸರ್ಕಾರದ ವಿರುದ್ಧ ನಡೆದ ಬಂಡಾಯದ ನೇತೃತ್ವ ವಹಿಸಿದ್ದ. ಹೌತಿ ಸಾವಿನ ಬಳಿಕ ಆತನ ಕುಟುಂಬ ಸದಸ್ಯರು ಸಂಘಟನೆಯನ್ನು ಕುಟುಂಬ ಸದಸ್ಯರು ಮುನ್ನಡೆಸುತ್ತಿದ್ದಾರೆ. ಹೌತಿಗಳು ಸದ್ಯ ಯೆಮೆನ್‌ನ 21 ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಹೌತಿಗಳು ಈ ಹಿಂದೆ ಮಾಜಿ ಅಧ್ಯಕ್ಷ ಸಲೇಹ್‌ ವಿರುದ್ಧವೂ ಬಂಡೆದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಹೌತಿಗಳು ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಸಲೇಹ್‌ ಬೆಂಬಲಕ್ಕೆ ನಿಂತಿದ್ದಾರೆ. ಹೌತಿಗಳ ವಿರುದ್ಧ ಸೌದಿ ಅರೇಬಿಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದು, ಇದಕ್ಕೆ ಅಮೆರಿಕ ಕೂಡ ಬೆಂಬಲ ನೀಡಿದೆ. ಸೌದಿ ಬೆಂಬಲಕ್ಕೆ ಬೆಹೆÅàನ್‌, ಕುವೈತ್‌, ಕತಾರ್‌, ಹಾಗೂ ಸಂಯುಕ್ತ ಅರಬ್‌ ರಾಷ್ಟ್ರಗಳೂ ನಿಂತುಕೊಂಡಿವೆ.

ಶಿಯಾ ವರ್ಸಸ್‌ ಸುನ್ನಿ
ಯೆಮನ್‌ನಲ್ಲಿ ನಡೆಯುತ್ತಿರುವ ಘರ್ಷಣೆ ಎರಡು ಗುಂಪಿನ ನಡುವೆ ಮಾತ್ರವಲ್ಲ. ಮೇಲ್ನೋಟಕ್ಕೆ ಇದು ಅಧಿಕಾರ ಕಲಹ ಎಂದು ಅನಿಸಿದರೂ, ಇದಕ್ಕೆ ಹಲವು ಆಯಾಮಗಳಿವೆ. ಶಿಯಾ ಆಡಳಿತದ ಇರಾನ್‌ ಮತ್ತು ಸುನ್ನಿ ಆಡಳಿತ ಸೌದಿ ಅರೇಬಿಯಾದ ನಡುವಿನ ಘರ್ಷಣೆಗೆ ಯೆಮೆನ್‌ ಬಲಿಪಶುವಾಗಿದೆ.

ಗಲ್ಫ್ ರಾಷ್ಟ್ರಗಳಿಗೆ ಯಮೆನ್‌ ಮೇಲೆ ಏಕೆ ಕಣ್ಣು?
ಸೌದಿ ಅರೇಬಿಯಾ ಮತ್ತು ಇರಾನ್‌ಗೆ ಯೆಮೆನ್‌ ಮೇಲೆ ಹಿಡಿತ ಸಾಧಿಸಿಕೊಳ್ಳುವ ತವಕ. ಈ ರಾಷ್ಟ್ರ ಬಾಬ್‌ ಅಲ್‌ ಮಂದಬ್‌ ಕೊಲ್ಲಿಯಲ್ಲಿದ್ದು, ಈ ಕೊಲ್ಲಿಯ ಮೂಲಕ ಕೆಂಪು ಸಮುದ್ರ ಹಾಗೂ ಆಡೆನ್‌ ಕೊಲ್ಲಿಗೆ ಸಂಪರ್ಕವಿದೆ. ಈ ಮಾರ್ಗದ ಮೂಲಕ ಜಗತ್ತಿನ ತೈಲ ಸಂಪತ್ತು ಸಾಗಣೆಯಾಗುತ್ತದೆ. ಒಂದು ವೇಳೆ ಯೆಮೆನ್‌ ಅನ್ನು ಹೌತಿ ವಶಪಡಿಸಿಕೊಂಡರೆ ಕೊಲ್ಲಿ ಮೂಲಕ ಮುಕ್ತ ಸಾಗಾಟ ಕಷ್ಟವಾಗಬಹುದು ಎನ್ನುವುದು ಈಜಿಪ್ಟ್ ಮತ್ತು ಸೌದಿ ಅರೇಬಿಯಾದ ಭಯ. ಆದರೆ, ಈ ಮಾರ್ಗವನ್ನು ಇರಾನ್‌ ವಶಕ್ಕೆ ಪಡೆದುಕೊಳ್ಳಲು ಹೊಂಚುಹಾಕುತ್ತಿದೆ ಎನ್ನಲಾಗಿದೆ. ಹೀಗಾಗಿ ಶಿಯಾ ಮುಸ್ಲಿಂ ಸಂಘಟನೆಯಾದ ಹೌತಿಯನ್ನು ಇರಾನ್‌ ಬೆಂಬಲಿಸುತ್ತಿದೆ. ಹೌತಿ ಉಗ್ರರಿಗೆ ಇರಾನ್‌ ಹಣಕಾಸು ಮತ್ತು ಸೌನ್ಯದ ನೆರವು ನೀಡುತ್ತಿದೆ ಎನ್ನುವುದು ಗಲ್ಫ್ ಅರಬ್‌ ಒಕ್ಕೂಟ ರಾಷ್ಟ್ರಗಳ ಆರೋಪ.

ಯೆಮೆನ್‌ ಎಲ್ಲಿದೆ?
ಮಧ್ಯಪ್ರಾಚ್ಯದ ಪ್ರಮುಖ ಅರಬ್‌ ರಾಷ್ಟ್ರಗಳಲ್ಲಿ ಒಂದಾದ ಯೆಮೆನ್‌ನ ಅಧಿಕೃತ ಹೆಸರು ರಿಪಬ್ಲಿಕ್‌ ಆಪ್‌ ಯೆಮೆನ್‌, ಈ ದೇಶದ ಉತ್ತರದಲ್ಲಿ ಸೌದಿ ಅರೇಬಿಯಾ ಇದ್ದು, ಪಶ್ಚಿಮದಲ್ಲಿ ಕೆಂಪು ಸಮುದ್ರ ಹಾಗೂ ಪೂರ್ವ ಭಾಗದಲ್ಲಿ ಓಮನ್‌ ಮತ್ತು ದಕ್ಷಿಣದಲ್ಲಿ ಅರಬ್ಬಿ ಸಮುದ್ರವಿದೆ. ಸನಾ ಇದರ ರಾಜಧಾನಿ, ಅತ್ಯಂತ ದೊಡ್ಡ ನಗರ. ಯೆಮೆನ್‌ ದೇಶದ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ದ್ವೀಪಗಳಿವೆ.

ಅತಂತ್ರ ಸ್ಥಿತಿಯಲ್ಲಿ ಭಾರತೀಯರು
ಯುದ್ಧ ಸಂತ್ರಸ್ತ ಯೆಮೆನ್‌ನಲ್ಲಿ ಸಿಲುಕಿರುವ 500 ಕನ್ನಡಿಗರೂ ಸೇರಿದಂತೆ 3500 ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ಆರಂಭಿಸಿದೆ. ಅವರಲ್ಲಿ 3000ಕ್ಕೂ ಹೆಚ್ಚು ಭಾರತೀಯರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಕರೆತರಲು ಏರ್‌ ಇಂಡಿಯಾ ವಿಮಾನವನ್ನು ಕೇಂದ್ರ ಸರ್ಕಾರ ಸನಾಕ್ಕೆ ಕಳುಹಿಸಿತ್ತು. ಆದರೆ ವಿಮಾನ ನಿಲ್ದಾಣದ ಮೇಲೆಯೂ ದಾಳಿ ನಡೆದಿರುವುದರಿಂದ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಹಡಗುಗಳ ಮೂಲಕ ಭಾರತೀಯರನ್ನು ಕರೆತರಬೇಕಾದ ಅನಿವಾರ್ಯತೆ ಎದುರಾಗಿದೆ. 

                  ಸಂಗ್ರಹ...
               ...............................
                 ನಿಝಾಮುದ್ದೀನ್
                 ಉಪ್ಪಿನಂಗಡಿ , ತಬೂಕ್..

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ